ಶ್ರೀ ರಾಘವೇಂದ್ರತೀರ್ಥರ ಮಂತ್ರಾರ್ಥ ಮಂಜರೀ : ವೈದಿಕ ವಾಙ್ಮಯಕ್ಕೊಂದು ಅನನ್ಯ ಕೊಡುಗೆ.

 

ಶ್ರೀರಾಘವೇಂದ್ರಸ್ವಾಮಿಗಳ ’ಮಂತ್ರಾರ್ಥಮಂಜರಿ’ ವೈದಿಕ ವಾಙ್ಮಯಕ್ಕೊಂದು ಅನನ್ಯವಾದ ಕೊಡುಗೆ. ಅವರ ಉಪೋದ್ಘಾತವಂತೂ ವೇದಾಧ್ಯಯನಕ್ಕೆ ತೊಡಗುವ ಜಿಜ್ಞಾಸುಗಳಿಗೊಂದು ದಾರಿ ದೀಪ; ಇಡಿಯ ವೈದಿಕಸಾಹಿತ್ಯಕ್ಕೇ ಒಂದು ಅಪೂರ್ವವಾದ ಭೂಮಿಕೆ; ವೇದಗಳ ವಿಸ್ಮಯದ ನಗರಕ್ಕೆ ತೆರೆದಿಟ್ಟ ಅಗಸೆಬಾಗಿಲು.

 

ಆಚಾರ್ಯ ಮಧ್ವರು ಋಕ್ಸಂಹಿತೆಯ ೪೦ ಸೂಕ್ತಗಳಿಗೆ ಭಾಷ್ಯ ರಚಿಸಿ, ಇತಿಹಾಸದಲ್ಲಿ ಮೊಟ್ಟ ಮೊದಲಬಾರಿ, ವೇದಾರ್ಥ ಚಿಂತನೆಗೆ ಒಂದು ಒಳನೋಟವಿತ್ತರು. ಇಡಿಯ ವೇದ ಒಬ್ಬನೇ ಭಗವಂತನನ್ನು ಪರಮಮುಖ್ಯವೃತ್ತಿಯಿಂದ ಪ್ರತಿಪಾದಿಸುತ್ತದೆ.  ಎಲ್ಲ ನಾಮಗಳೂ ಮೂಲತಃ ಭಗವಂತನ ಹೆಸರುಗಳು; ಅವನ ಹೆಸರಲ್ಲದ ಶಬ್ದವೇ ಇಲ್ಲ ಎಂಬ ಮೂಲತತ್ತ್ವವನ್ನು ಮೊದಲ ಬಾರಿಗೆ ಆವಿಷ್ಕರಿಸಿದರು. ಜಡ್ಡುಕಟ್ಟಿದ ಕರ್ಮಕಾಂಡದ ಕ್ಲೇಷೆಯಲ್ಲೇ ಮುಳುಗಿದ್ದ ಮೀಮಾಂಸ್ಕರು ದಿಗಿಲೆದ್ದರು. ಬಹಳ ಮಂದಿಗೆ ಇಂದಿಗೂ ಇದನ್ನು ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಆಚಾರ್ಯರು ಈ ಸತ್ಯವನ್ನು ಸಾರಿದ ಮೇಲೂ ಸಾಯಣರಂಥವರು ಹಳೆಯ ಜಾಡಿನಲ್ಲೇ ಸಾಗಿದರು!

 

ಆಚಾರ್ಯರು ಮೊದಲು ಸಾರಿದರು: ’ತ್ರಯೋರ್ಥಾಃ ಸರ್ವವೇದೇಷು ........ ವೇದಗಳ ಒಂದೊಂದು ಮಂತ್ರಕ್ಕೂ ಮೂರು ಅರ್ಥಗಳು!

 

ಒಮ್ಮೆ ಆಡಿದ ಮಾತಿಗೆ ಒಂದೇ ಅರ್ಥ ಎಂದು ಗಟ್ಟಿಯಾಗಿ ಕೂತ ಮೀಮಾಂಸಕರಿಗೆ ಇದನ್ನು ಜೀರ್ಣಿಸಿಕೊಳ್ಳುವುದಾಗಲಿಲ್ಲ.

 

ವಾಸ್ತವವಾಗಿ ಎಲ್ಲ ಶಬ್ದಕ್ಕೂ ಮೂರು ಅರ್ಥ ಉಂಟು : ಆತ್ಮ ಎಂದರೆ ಮೇಲು ನೋಟಕ್ಕೆ ಕಾಣುವ ಈ ದೇಹ. ಒಳನೋಟಕ್ಕೆ ಆತ್ಮ ಎಂದರೆ ಮನಸ್ಸು. ಇನ್ನೂ ಒಳಕ್ಕೆ ನೋಡಿದರೆ ಆತ್ಮ ಎಂದರೆ ಜೀವ. ಅಲ್ಲಿಗೇ ಮುಗಿಯಲಿಲ್ಲ. ಇನ್ನೂ ಆಳಕ್ಕೆ ಇಳಿದರೆ ಆತ್ಮ ಎಂದರೆ ಪರಮಾತ್ಮ.

 

ಇದು ಭಾಷಾಶಾಸ್ತ್ರದ ಸಹಜ ಪ್ರಕ್ರಿಯೆ. ಮೀಮಾಂಸಕರಿಗೆ ಇದು ಹೊಳೆಯಲಿಲ್ಲ. ಅಚ್ಚರಿಯ ಸಂಗತಿ ಎಂದರೆ ಭಾಷಾಶಾಸ್ತ್ರ ಪಂಡಿತರಿಗೇ ಇದು ಹೊಳೆಯಲಿಲ್ಲ. ಅವರು ಹಳೆಯ ಕಂತೆಗಳನ್ನೇ ಬಿಚ್ಚಿ ಉರು ಹೊಡೆದರು! ಭಾಷಾ ಶಾಸ್ತ್ರದ ಈ ಅಂತರಂಗವನ್ನು ಮೊದಲು ಬಹಿರಂಗಗೊಳಿಸಿದವರು ಆಚಾರ್ಯ ಮಧ್ವರು

 

ಆದರೆ ಏನು ಮಾಡೋಣ! ಆಚಾರ್ಯರ ಭಾಷೆಯೇ ಬಹಳ ಮಂದಿಗೆ ಅರ್ಥವಾಗಲಿಲ್ಲ. ಅರ್ಥವಾಗಬೇಕೆಂದು ತರ್ಕ ಓದಿದರು. ತರ್ಕದಿಂದ ತಲೆಕೆಟ್ಟಿತೇ ಹೊರತು ಆಚಾರ್ಯರ ಭಾಷೆ ಅರ್ಥವಾಗಲಿಲ್ಲ. ತರ್ಕ ಕುತರ್ಕವಾಗಿ ಕಾಡಿತು; ಶುಷ್ಕತರ್ಕವಾಗಿ ಕಾಡಿತು. ಸುತರ್ಕವಾಗಲೇ ಇಲ್ಲ. ’ಅವಿದ್ಯಾಯಾಮಂತರೇ ವರ್ತಮಾನರಾದರು, ಸ್ವಯಂ ಧೀರರಾದರು. ಪಂಡಿತಂ ಮನ್ಯಮಾನ್ಯರಾದರು. ತರ್ಕ ಬೆಳೆಯಿತು. ಅನುಭವ ತಲೆ ಮರೆಸಿಕೊಂಡಿತು. ಅನುಭಾವ ಬೆಟ್ಟ ಹತ್ತಿತು

 

ಶ್ರೀರಾಘವೇಂದ್ರ ಯತಿಗಳು ಇಂಥಲ್ಲಿ ಬಹಳ ಮುಖ್ಯರಾಗುತ್ತಾರೆ. ಅವರು ತರ್ಕವನ್ನು ಸುತರ್ಕ ಮಾಡಿದರು. ಅವರು ವೇದಗಳಿಗೆ ಮೂರು ಅರ್ಥ ಎಂಬ ಮಾತನ್ನು ಮೀಮಾಂಸಕರ ತರ್ಕದಿಂದಲೇ ಅಟ್ಟು (ಅಡಿಗೆ ಮಾಡಿ) ಅವರಿಗೆ ಉಣಬಡಿಸಿದರು. ಪೂರಕವಾಗಿ ಶಾಸ್ತ್ರಪುರಾಣಗಳನ್ನು ಕೊಟ್ಟು ನಮ್ಮ ಅನುಭವವನ್ನು ಕೆಣಕಿದರು; ಬಡಿದೆಬ್ಬಿಸಿದರು.

 

ಒಂದು ಮುಖ್ಯ ಅರ್ಥ; ಎರಡು ಪರಮ ಮುಖ್ಯ ಅರ್ಥಗಳು.

 

ಅಗ್ನಿಮೀಳೇ’ ಎಂದರು. ’ಅಗ್ನಿಯನ್ನು ಸ್ತುತಿಸುತ್ತೇನೆ’ ಎಂದರು. ಅವರು ಬೆಂಕಿಯನ್ನು ಸ್ತುತಿಸಲಿಲ್ಲ. ಬೆಂಕಿಯ ಒಳಗಿರುವ ಅಗ್ನಿದೇವತೆಯನ್ನು ಸ್ತುತಿಸಿದರು. ಬೆಂಕಿ ಎನ್ನುವುದು ಅಮುಖ್ಯ ಅರ್ಥವಾಯಿತು. ಅಗ್ನಿದೇವತೆ ಎನ್ನುವುದು ಮುಖ್ಯ ಅರ್ಥ. ಅವನಿಗೂ ಅಂತರ್ಯಾಮಿಯಾದ ಅಗ್ನಿನಾರಾಯಣ ಎನ್ನುವುದು ಪರಮಮುಖ್ಯ ಅರ್ಥ. ’ಏಷ ತ ಆತ್ಮಾsಂತರ್ಯಾಮ್ಯಮೃತಃ ’

ಸಂಗತಿ ಇಲ್ಲಿಗೇ ಮುಉಗಿಯಲಿಲ್ಲ. ಅಗ್ನಿ ಎಂದರೆ ಅಗ್ನಿಯ ಅಂತರ್ಯಾಮಿ ಅಷ್ಟೇ ಅಲ್ಲ. ನನ್ನ ಅಂತರ್ಯಾಮಿಯೂ ಹೌದು. ಇದು ಆಧ್ಯಾತ್ಮಿಕ ಅರ್ಥ.

 

ಅಗ’ ಎಂದರೆ ಸ್ವತಃ ಚಲನಶೀಲನಲ್ಲದ, ಭಗವಂತನ ಪ್ರತಿಬಿಂಬನಾದ ಜೀವ. ಅವನನ್ನು ನಡೆಸುವನು, ನಿಯಮಿಸುವನು ಅಗ್ನಿ; ಬಿಂವರೂಪನಾದ ಭಗವಂತ. ಅವನೂ ಈ ಪದದಿಂದ ವಾಚ್ಯನೇ.

 

ಯಜ್ಞದಲ್ಲಿ, ಅಗ್ನಿಮುಖ ಆರಾಧನೆಯಲ್ಲಿ ಈ ಮಂತ್ರವನ್ನು ಬೆಳೆಸಿದಾಗ ಅಗ್ನಿಯ ಅಂತರ್ಯಾಮಿಯಾದ ನಾರಾಯಣ ಮುಖ್ಯಾರ್ಥ. ಧ್ಯಾನದಲ್ಲಿ, ಅಂತರಂಗದ ಮಾನಸ ಯಜ್ಞದಲ್ಲಿ ಈ ಮಂತ್ರವನ್ನು ಬಳಸುವಾಗ ಪ್ರತಿಯೊಬ್ಬ ಸಾಧಕನ ಅಂತರ್ಯಾಮಿಯಾದ ನಾರಾಯಣ ಈ ಪದದಿಂದ ವಾಚ್ಯನಾಗುತ್ತಾನೆ.

 

ಹೀಗೆ ಪ್ರತಿ ದೇವತಾಮಂತ್ರದಲ್ಲಿ ಅಗ್ನಿಯ ಅಂತರ್ಯಾಮಿಯಾದ ನಾರಾಯಣ ಮುಖ್ಯಾರ್ಥ. ಧ್ಯಾನದಲ್ಲಿ, ಅಂತರಂಗದ ಮಾನಸ ಯಜ್ಞದಲ್ಲಿ ಈ ಮಂತ್ರವನ್ನು ಬಳಸುವಾಗ ಪ್ರತಿಯೊಬ್ಬ ಸಾಧಕನ ಅಂತರ್ಯಾಮಿಯಾದ ನಾರಾಯಣ ಈ ಪದದಿಂದ ವಾಚ್ಯನಾಗುತ್ತಾನೆ.

 

ಹೀಗೆ ಪ್ರತಿ ದೇವತಾ ಮಂತ್ರದಲ್ಲಿ ಎರಡು ಪರಮ ಮುಖ್ಯಾರ್ಥಗಳು. ಒಂದು ಆಯಾ ಮಂತ್ರದ ಮುಖ್ಯಾರ್ಥವಾದ ದೇವತೆಯಅಂತರ್ಯಾಮಿಯಾಗಿ ತತ್ತನ್ನಾಮಕನಾದ ನಾರಾಯಣ; ಇನ್ನೊಂದು ಸಾಧಕನ ಬಿಂಬರೂಪಿಯಾದ ನಾರಾಯಣ. ಇದನ್ನು ನಮ್ಮ ಎದೆಗೆ ಮುಟ್ಟುವಂತೆ, ತಟ್ಟುವಂತೆ ವಿವರಿಸಿ, ಸಾಧಕಲೋಕಕ್ಕೆ ಮಹೋಪಕಾರ ಮಾಡಿದವರು ಶ್ರೀರಾಘವೇಂದ್ರಸ್ವಾಮಿಗಳವರು.

 

ಮಂತ್ರಾರ್ಥಮಂಜರಿಯ ’ಉಪೋದ್ಘಾತದ’ ಇನ್ನೊಂದು ಅಪೂರ್ವ ಕೊಡುಗೆಯನ್ನು ಇಲ್ಲಿ ನೆನಪಿಸಲೇಬೇಕು. ಆಚಾರ್ಯ ಮಧ್ವರು ತಮ್ಮ ಗ್ರಂಥಗಳಲ್ಲಿ ತತ್ತ್ವವಾದದ ಸಮರ್ಥನೆಗಾಗಿ ಅನೇಕ ಪ್ರಮಾಣಗ್ರಂಥಗಳನ್ನು ಉಲ್ಲೇಖಿಸಿದ್ದಾರೆ

ಅವುಗಳಲ್ಲಿ ಈಗ ಕೆಲವು ಉಪಲಬ್ಧವಿಲ್ಲ. ಕೆಲವು ವಾದಿಗಳಂತೂ ಈ ಪ್ರಮಾಣಗಳನ್ನು ’ಕಪೋಲಕಲ್ಪಿತ’ ಎನ್ನುವ ಮಟ್ಟಕ್ಕೂ ಹೋದರು. ಯಾವ ಪ್ರಾಚೀನ ಗ್ರಂಥಕಾರರೂ ಈ ಅತಿವಾದಕ್ಕೆ ಉತ್ತರ ಕೊಡಲಿಲ್ಲ. ಆದರೆ ಶ್ರೀರಾಘವೇಂದ್ರಸ್ವಾಮಿಗಳವರು ಈ ಪ್ರಶ್ನೆಯನ್ನೆತ್ತಿಕೊಂಡು ಈ ಅತಿವಾದಿಗಳಿಗೆ ಒಂದು ಒಳ್ಳೆಯ ಪ್ರತಿಬಂದಿಯನ್ನೇ ನೀಡಿದ್ದಾರೆ.

 

ದೊಡ್ಡವರು - ಅನೇಕ ಗ್ರಂಥಗಳನ್ನು ನೋಡಿದವರು - ಅವುಗಳನ್ನು ಉದ್ಧರಿಸುತ್ತಾರೆ. ನಾಲ್ಕೈದು ಗ್ರಂಥಗಳನ್ನಷ್ಟೇ ಓದಿಕೊಂಡು ತಾವೇ ಪಂಡಿತರೆಂದು ಭ್ರಮಿಸಿಕೊಂಡ ದಡ್ಡರು ಇಂತಹಾ ಉದ್ಧರಣೆಯನ್ನು ಪ್ರಶ್ನಿಸುವುದು ನಾಚಿಕೆಗೇಡು. ಕನಿಷ್ಠ ನಮ್ಮ ದಡ್ಡಾತನದ ಅರಿವಾದರೂ ನಮಗಿರಬೇಡವೇ?

 

ಹೀಗೆ ಪ್ರತಿವಾದಿಗಳ ದಡ್ಡತನವನ್ನು ಎಚ್ಚರಿಸಿದವರು ಶ್ರೀರಾಘವೇಂದ್ರಗುರುಗಳು. ಅವರು ಅಷ್ಟಕ್ಕೇ ನಿಲ್ಲುವುದಿಲ್ಲ. ಬೇರೆ ಭಾಷ್ಯಕಾರರೂ ಈಗ ಉಪಲಭ್ಧವಿಲ್ಲದ ಪ್ರಮಾಣವಚನಗಳನ್ನು ಉಲ್ಲೇಖಿಸಿದಿದ್ದಾರೆ. ಅದನ್ನು ಹೇಗೆ ಕಣ್ಮುಚ್ಚಿ ಒಪ್ಪಿಕೊಳ್ಳುತ್ತೀರಾ? ಅವರು ಮಾಡಬಹುದಾದನ್ನು ಆಚಾರ್ಯ ಮಧ್ವರು ಮಾತ್ರ ಏಕೆ ಮಾಡಬಾರದು ಎಂದು ಪ್ರಶ್ನಿಸುತ್ತಾರೆ.

 

ನಮ್ಮ ವಾದದ ಹಿಂದೆ, ನಮಗೆ ಗೊತ್ತಿಲ್ಲದೆಯೇ ಅಂಟಿಕೊಂಡಿರುವ ಸ್ವಮತಾವೇಶವನ್ನು, ದುರಾಗ್ರಹದ ಕಮಟನ್ನು ನಮಗೆಯೇ ತೋರಿಸಿಕೊಡುತ್ತಾರೆ.

 

ಈಗ ಉಪಲಬ್ಧವಿಲ್ಲದ ವೇದವಾಕ್ಯವನ್ನು ಶಾಂಕರಭಾಷ್ಯದಲ್ಲಿ ಉಲ್ಲೇಖಿಸಲಾಗಿದೆ. ಮೀಮಾಂಸಕರು ಇದಕ್ಕೆ ಏನು ಸಮರ್ಥನೆ ನೀಡುತ್ತಾರೆ?


ಅವರು ನೀಡುವ ಸಮರ್ಥನೆ ಅವರ ಸಮರ್ಥನೆಯಷ್ಟೇ ಅಲ್ಲ; ಆಚಾರ್ಯ ಮಧ್ವರ ಸಮರ್ಥನೆಯೂ ಆಗಿಬಿಡುತ್ತದೆ ಎಂದು ಚಮತ್ಕಾರಿಕವಾಗಿ ಈ ಸಮಸ್ಯೆಯನ್ನು ವಿಶ್ಲೇಷಿಸಿದವರು ಗುರುರಾಘವೇಂದ್ರರು. ಸುದೈವದಿಂದ ಪರಕೀಯರು ’ಕಪೋಲಕಲ್ಪಿತ’ ಎಂದು ಪರಕೀಯರು ಆಪಾದಿಸಿದ ವೇದಭಾಗಗಳು ಇಂದು ಉಪಲಭ್ದವಾಗಿವೆ. ಆದ್ದರಿಂದ ಶ್ರೀರಾಘವೇಂದ್ರಗುರುಗಳ ವಾದಕ್ಕೆ ಇನ್ನಷ್ಟು ಪುಷ್ಟಿ ದೊರಕಿದಂತಾಯಿತು.


ಇಂಥ ಅನೇಕ ಅಪೂರ್ವ ವಿಷಯಗಳಿಂದ ಗುರುರಾಘವೇಂದ್ರರ ಮಂತ್ರಾರ್ಥಮಂಜರೀ, ವಿಶೇಷತಃ ಅದರ ಉಪೋದ್ಘಾತ ವೈದಿಕ ವಾಙ್ಮಯದ ಅಧ್ಯಯನಕ್ಕೆ ಬಹಳ ಮುಖ್ಯವಾಗಿದೆ. ಅದರಿಂದ ಶ್ರೀರಾಘವೇಂದ್ರರ ಈ ಕೃತಿ ವೈದಿಕಸಾಹಿತ್ಯಕ್ಕೆ ಒಂದು ಸಾಟಿಯಿಲ್ಲದ ಕೊಡುಗೆ.

 

Read this article

------ () ------