ವಿಜ್ಞಾನ ಮತ್ತು ಸಂಧ್ಯಾವಂದನೆ

 

ಆಂಗ್ಲ ಮೂಲ:  ಡಾ. ಪ್ರಹ್ಲಾದ, ವಿಜ್ಞಾನಿ, ರಕ್ಷಣಾ ಇಲಾಖೆ, ನವದೆಹಲಿ

ಕನ್ನಡಕ್ಕೆ: ಶ್ರೀ ದಿಲೀಪ ರತ್ನಾಕರ, ಬೆಂಗಳೂರು.

-------------------------------------------------------------------------------------------------------------------------------------


ನಾನು ಒಬ್ಬ ವಿಜ್ಞಾನಿ, ಅದರಲ್ಲೂ ಒಬ್ಬ ವಿಮಾನ-ತಂತ್ರಜ್ಞ. ಆದುದರಿಂದ ನಾನು ನನ್ನ ವಾತಾವರಣ, ಸುತ್ತ ಮುತ್ತಲಿನ ಜನರು, ಅವರ ಹವ್ಯಾಸಗಳು, ಜೀವನ ಶೈಲಿ, ಪದ್ದತಿಗಳು, ಎಲ್ಲವನ್ನೂ ವಿಜ್ಞಾನದ ದೃಷ್ಟಿಯಿಂದಲೇ ನೋಡುತ್ತಾ ಬಂದಿದ್ದೇನೆ. ಆದರೆ ದುರಾದೃಷ್ಟವಶಾತ್ ನಮ್ಮ ದೇಶದಲ್ಲಿ ಇರುವ ಎಲ್ಲ ರೀತಿಯ ಜ್ಞಾನ, ವಿಜ್ಞಾನ, ಸಾಹಿತ್ಯ, ಶಿಕ್ಷಣ, ಎಲ್ಲದರಲ್ಲೂ ಪಾಶ್ಚಾತ್ಯರ ಪ್ರಭಾವ ಇದೆ ಅಥವಾ ಪಾಶ್ಚ್ಯಾತ್ಯರಿಂದ ನಿರ್ಮಿಸಲಾಗಿದೆ. ಭಾರತ ದೇಶದಲ್ಲಿ ಸಾವಿರಾರು ವರ್ಷಗಳಿಂದ ವೈದ್ಯಕೀಯ ಶಾಸ್ತ್ರ, ಲೋಹ ಶಾಸ್ತ್ರ, ಗಣಿತ, ಖಗೋಳಶಾಸ್ತ್ರ, ಯಂತ್ರಶಾಸ್ತ್ರ, ವೈಮಾನಿಕತೆ, ಇತ್ಯಾದಿಗಳಲ್ಲಿ ಅಪಾರವಾದ ಜ್ಞಾನವಿದ್ದರೂ ಸಹ, ಅವುಗಳ ಮುಖ್ಯ ಭಾಗ ಇಂದು ನಷ್ಟವಾಗಿದೆ. ಪೂರ್ವೋತ್ತರ ಭಾಗದಿಂದ ಹಾಗು ಸಮುದ್ರದ ಮೂಲಕ ಬಂದಂತಹ ದಾಳಿಕಾರರು ಇಲ್ಲಿ ಇದ್ದಂತಹ ವೈಜ್ಞಾನಿಕ, ಸಾಹಿತ್ಯಕ, ಧಾರ್ಮಿಕ, ಇತ್ಯಾದಿ ಗ್ರಂಥಗಳನ್ನು ಸೂರೆಮಾಡಿ, ತಮ್ಮ ತಮ್ಮ ದೇಶಗಳನ್ನು ಸಮಾಜವನ್ನು ಬದಲಾಯಿಸಿಕೊಂಡು, ಭಾರತವನ್ನು ಕತ್ತಲಲ್ಲಿ ನೂಕಿದರೆಂದು ಹೇಳಲಾಗಿದೆ.

ಮೂಲ ವೈಜ್ಞಾನಿಕ ತತ್ವಜ್ಞಾನಿಗಳು:

ಆದರೆ ನಮ್ಮ ಸಮಾಜದ ಶ್ರದ್ಧೆ ನಂಬಿಕೆಗಳ ದೆಸೆಯಿಂದ, ಹಾಗು ಉತ್ಕಟ ನೇತಾರರು ಮತ್ತು ಧಾರ್ಮಿಕ ಧುರೀಣರಿಂದ, ನಮ್ಮ ಪ್ರಾಚೀನ ವಿಜ್ಞಾನದ ಕೆಲವು ಅಂಶಗಳು ಉಳಿದುಕೊಂಡು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡಿವೆ. ಹಲವಾರು ಪೀಳಿಗೆಗಳಿಂದ ಇಳಿದು ಬಂದ ಈ ಪರಂಪರೆಯು ಕಾಲಕಾಲಕ್ಕೆ ಹಲವಾರು ಬಾರಿ ಪರಿವರ್ತನೆ ಹಾಗೂ ರೂಪಾಂತರಗೊಂಡಿದ್ದು ವಿಕೃತಿಗೂ ಒಳಗಾಗಿದೆ. ಮೂಲತಃ ನಮ್ಮ ಪ್ರತಿಯೊಂದು ಸಾಂಪ್ರಾದಾಯಿಕ ಆಚರಣೆಯಲ್ಲೂ, ಮಂತ್ರೋಚ್ಚಾರಣೆಯಲ್ಲೂ, ಜಪ ಇತ್ಯಾದಿಗಳ ಹಿಂದೆ ಒಂದು ವೈಜ್ಞಾನಿಕ ಕಾರಣವಿದ್ದು, ಇದನ್ನು ಅರಿತಿದ್ದ ನಮ್ಮ ಪೂರ್ವ ದಾರ್ಶನಿಕರು ಅವರದೇ ಆದ ರೀತಿಯಲ್ಲಿ ವೈಜ್ಞಾನಿಕ ತತ್ವಜ್ಞಾನಿಗಳಾಗಿದ್ದರು. ಇಂದು ಈ ಆಚರಣೆಗಳು ಕೇವಲ ಶಾಸ್ತ್ರೀಯ ವಿಧಿಗಳಾಗಿ ಉಳಿದು, ಅವುಗಳ ಹಿಂದಿನ ವೈಜ್ಞಾನಿಕ ತುಣುಕಗಳ ಅರಿವು ಇಲ್ಲದ ಹಾಗೆ ಆಗಿದೆ.

ಬುದ್ಧಿವಂತ ಪೀಳಿಗೆ:

ಹಿಂದಿನ ಪೀಳಿಗೆಯ ಮಕ್ಕಳು ಮತ್ತು ಯುವಕರು ಗುರುಗಳ ಮಾತಿಗೆದುರಾಡದ ಮುಗ್ಧರಾಗಿದ್ದರೇ ವಿನಃ ಎಲ್ಲವನ್ನೂ ಪ್ರಶ್ನಿಸುವ ಕುತೂಹಲಿಗಳಾಗಿರಲಿಲ್ಲ. ಮಂತ್ರಗಳ ಮತ್ತು ಧಾರ್ಮಿಕ ಆಚರಣೆಗಳ ಹಿಂದಿನ ವೈಜ್ಞಾನಿಕ ಕಾರಣಗಳನ್ನು ಅರಿಯದ ಹಿರಿಯರು ತಮ್ಮ ಕಿರಿಯರಿಗೆ ಬೋಧಿಸುವುದೇನೂ ಇರಲಿಲ್ಲ. ಅವರದೇನಿದ್ದರೂ ಒತ್ತಾಯದ ಕಲಿಕಾ ವಿಧಾನ. ಅಂತೆಯೇ ಕಿರಿಯರು ಅವರನ್ನು ಅನುಕರಿಸುತ್ತಿದ್ದರು ಕೂಡ. ಆದರೆ ಈಗಿನ ಪೀಳಿಗೆಯು ವಿಭಿನ್ನ. ಪ್ರತಿಯೊಂದನ್ನೂ ಪ್ರಶ್ನಿಸಿ, ವಿಶ್ಲೇಶಿಸಿ ಅರ್ಥಮಾಡಿಕೊಳ್ಳುವ ಗುಣವುಳ್ಳದ್ದು. ಒಂದು ವೇಳೆ ವಿವರಣೆಯು ತಮಗೆ ಅರ್ಥವಾಗದಿದ್ದರೆ ಅಥವಾ ತಮ್ಮ ಯುಕ್ತಿಗನುಗುಣವಾಗಿರದಿದ್ದರೆ ಒಡನೆಯೇ ತಿರಸ್ಕರಿಸಿ ಬಿಡುತ್ತಾರೆ.

ಅತಿವೇಗದ ಇಂದಿನ ಪ್ರಪಂಚ:

ನಾವು ತಿಳಿಯಬೇಕಾದ ಮತ್ತೊಂದು ಅಂಶ; ನಮ್ಮ ಪ್ರಾಚೀನ ಜ್ಞಾನ ಹಾಗು ಆಚರಣೆಗಳು ಜನಸಾಮಾನ್ಯರಿಗಾಗಿಯೇ ಇದ್ದರೂ ಕೂಡ, ಅಂದಿನ ಪ್ರಾಪಂಚಿಕ ವ್ಯವಹಾರಗಳು ನಿಧಾನಗತಿಯಲ್ಲಿದ್ದದ್ದು. ಯಾವ ಕೆಲಸಕ್ಕೂ ಅವಸರವಿಲ್ಲದೆ, ಸಾಂಪ್ರದಾಯಿಕ ಆಚರಣೆಗಳು ಹಲವಾರು ಘಂಟೆಗಳ ಕಾಲ ಅಥವಾ ಹಲವಾರು ದಿನಗಳ ಕಾಲ ನಡೆಯುತ್ತಿದ್ದವು (ಉದಾಹರಣೆ: ಮದುವೆಗಳು, ಯಜ್ಞಗಳು). ಅನೇಕ ಸಂಧರ್ಭಗಳಲ್ಲಿ ವೈದ್ಯಕೀಯ ಚಿಕಿತ್ಸೆಗಳು ಹಲವು ತಿಂಗಳುಗಳ ಕಾಲ ನಡೆಯುತ್ತಿದ್ದವು. ಆದರೆ ಅಷ್ಟು ಸಮಯ ಇಂದೆಲ್ಲಿದೆ? ಪ್ರತಿಯೊಂದು ಕಾರ್ಯವು ಥಟ್ಟನೆ ಆಗದಿದ್ದರೂ ಅತಿಶೀಘ್ರದಲ್ಲಿ ಆಗಬೇಕೆಂಬ ಕಾಲ ಇದು. ಹೀಗಾಗಿ ನಮ್ಮ ಆಚರಣೆಗಳ ಮೂಲ ವೈಚಾರಿಕ ತಿರುಳನ್ನು ಉಳಿಸಿಕೊಂಡು, ಅವುಗಳನ್ನು ಸಂಕ್ಷೇಪಿಸಬೇಕಾಗಿದೆ. ಆದರೆ ಮೂಲ ಪ್ರಕ್ರಿಯೆಯ ಪರಿಜ್ಞಾನವೇ ಇಲ್ಲದೆ ಇದನ್ನು ಮಾಡುವುದಾದರೂ ಹೇಗೆ? ನಾವು ಅನುಸರಿಸುತ್ತಿರುವ ಬಹಳಷ್ಟು ಆಚರಣೆಗಳು ಇಂದಿನ ಯುವಜನಾಂಗವನ್ನು ದಿಗಿಲುಗೊಳಿಸುತ್ತಿದೆ.

ಸಂಧ್ಯಾವಂದನೆ:

ಮಾಧ್ವರಾದ ನಾವು ತಪ್ಪದೆ ಶ್ರದ್ಧಾ ಭಕ್ತಿಗಳಿಂದ ಸಂಧ್ಯಾವಂದನೆಯನ್ನು ಮಾಡಬೇಕಾಗಿದೆ. ಒಬ್ಬ ಬ್ರಾಹ್ಮಣ ಸಂಧ್ಯಾವಂದನೆ ಮಾಡುತ್ತಿರುವದನ್ನು ಅವಲೋಕಿಸಿದರೆ ಆತನ ಚಲನೆಗಳು ಕೇವಲ ಮಾಮೂಲಿನ ದಿನಚರಿಯೆಂಬುದಾಗಿ ಕಾಣುತ್ತವೆ. ಆತನು ಯಾಂತ್ರಿಕವಾಗಿ ಕೆಲವು ಕ್ರಿಯೆಗಳನ್ನು ಮಾಡುತ್ತ ಒಳಮನಸ್ಸಿನಲ್ಲೇ ಕೆಲವು ಮಂತ್ರಗಳನ್ನು ಹೇಳಿಕೊಳ್ಳುತ್ತಿದ್ದರೂ ತನ್ನ ಮನಸ್ಸನ್ನು ಕಛೇರಿ, ಮಕ್ಕಳು, ರಾಜಕೀಯ ಇತ್ಯಾದಿ ಕಡೆಗಳಿಗೆ ಹಾಯಿಸುತ್ತಿರುತ್ತಾನೆ. ಹಿಗೆ ಇರುವಾಗ, ಯುವಕರನ್ನು ಮತ್ತು ಬುದ್ಧಿವಂತರನ್ನು ಹೇಗೆ ಉತ್ತೇಜಿಸಲು ಸಾಧ್ಯ? ನಮ್ಮ ಪೂರ್ವಜರು ಸಂಧ್ಯಾವಂದನೆ ಇತ್ಯಾದಿಗಳಲ್ಲಿ ಕಂಡಂತಹ ಲಾಭವನ್ನು ನಾವು ಹೇಗೆ ಪಡೆದುಕೊಳ್ಳುವುದು? ಈ ಎಲ್ಲಾ ಆಚರಣೆಗಳ ಹಿಂದೆ ಒಂದು ವೈಜ್ಞಾನಿಕ ಹಿನ್ನಲೆ ಇತ್ತೇ? ಇರುವುದಾದಲ್ಲಿ ಅದನ್ನು ಇಂದಿನ ಪೀಳಿಗೆಗೆ ಅರ್ಥವಾಗುವಂತೆ ಯಾಕೆ ಜನಪ್ರಿಯಗೊಳಿಸಿಲ್ಲ?

ಯೋಗದ ವ್ಯಾಖ್ಯಾನ:

ಹಲವು ಜನ ನಮ್ಮ ಪ್ರಾಚೀನ ಯೋಗ ಶಾಸ್ತ್ರವನ್ನು ಬಹಳಷ್ಟು ಮಟ್ಟಿಗೆ ನಿರ್ವಚನ ಮಾಡಲು ಯತ್ನಿಸಿ ಹೆಚ್ಚಿನ ಮಟ್ಟಿಗೆ ಯಶಸ್ಸನ್ನು ಹೊಂದಿದ್ದಾರೆ. ಇಂತಹ ಒಂದು ಪ್ರಯತ್ನವು ನಾವು ಪರಿಪಾಲಿಸುತ್ತಿರುವ ಪ್ರತಿಯೊಂದು ಕಾರ್ಯ ಹಾಗು ವಿಧಿಗಳಲ್ಲಿಯೂ ನಡೆಯಬೇಕಾಗಿದೆ.

ವಿಜ್ಞಾನ ಮತ್ತು ಸಂಧ್ಯಾವಂದನೆ:

ಸಂಧ್ಯಾವಂದನೆಯನ್ನು ನೋಡುವ. ನಮ್ಮ ದೇಹದ ಪ್ರತಿಯೊಂದು ಕಾರ್ಯವು ಆಯಾ ಭಾಗಕ್ಕೆ ಚಲಿಸುವ ರಕ್ತದಿಂದ ಅತಿಯಾಗಿ ಪ್ರಭಾವಿತವಾಗಿದೆ. ಅದು ನಮ್ಮ ಕಣ್ಣೆ ಇರಬಹುದು ಅಥವ ಮೂಗು, ಕಿವಿ, ಚರ್ಮ, ಉದರ, ಹೃದಯ, ಮೆದುಳು, ಜನನೇಂದ್ರಿಯ, ಸ್ನಾಯು, ನರಮಂಡಲ, ರಕ್ತಪರಿಚಲನೆ, ಯಾವುದೆ ಅವಯವ ಇರಬಹುದು. ನಮ್ಮ ಆಹಾರ, ನೀರು ಮತ್ತು ಉಸಿರಾಡಿದ ಗಾಳಿಯಿಂದ ತೆಗೆದಂತಹ ಸರಿಯಾದ ಸಾರವು ನಮ್ಮ ದೇಹದ ಎಲ್ಲ ಅವಯವಗಳಿಗೆ ಸೇರಿ, ಅವುಗಳನ್ನು ಪೋಷಿಸಬೇಕು, ಪುಷ್ಟೀಕರಿಸಬೇಕು, ಪುನಃ ಶಕ್ತಿ ತುಂಬಬೇಕು, ಬೇಕಾದಲ್ಲಿ ದುರಸ್ತಿಗೊಳಿಸಬೇಕು ಹಾಗು ಆಧಾರಯುಕ್ತವಾಗಿರಬೇಕು. ದೇಹದ ರಕ್ತ ಪರಿಚಲನೆಯ ವ್ಯವಸ್ಥೆ ಸಹಜವಾಗಿ ದೈನಂದಿನ ಕ್ರಿಯೆಯಂತೆ ನಡೆಯುತ್ತಾ ಇದ್ದರೂ, ನಮ್ಮ ಪೂರ್ವಜರು ಅದನ್ನು ಇನ್ನು ಹೆಚ್ಚು ಫಲಕಾರಿ ಮಾಡಲು ದೇಹವನ್ನು ನಿಯಂತ್ರಿತವಾಗಿ ನಡೆಸಿಕೊಳ್ಳುವ ವಿಧಾನವನ್ನು ಕಂಡು ಹಿಡಿದಿದ್ದರು. ಹೀಗಾಗಿ ಸಂಧ್ಯಾವಂದನೆ ವಿಕಸಿತವಾಯಿತು.

ಹಾಗೆ ನೊಡಿದರೀ, ನಿಜವಾಗಿಯೂ, ಸಂಧ್ಯಾವಂದನೆಯ ಪ್ರತಿಯೊಂದು ವಿಧಿ ವಿಧಾನಗಳೂ ಮನಸ್ಸನ್ನೂ, ದೇಹವನ್ನು ಕೈಗಳಿಂದ, ಬೆರಳುಗಳಿಂದ ಮತ್ತು ಉಸಿರಾಟದಿಂದ, ಒಂದೊಂದಾಗಿ, ಏಕಾಗ್ರತೆಯಿಂದ ಚೈತನ್ಯಗೊಳಿಸುವ ಯತ್ನಗಳು. ದೇಹದ ಒಂದೊಂದು ಭಾಗವನ್ನು ಒಂದೊಂದು ಬಾರಿ ಸಣ್ಣ ಸಣ್ಣ ಕಾಲಾವಧಿಗಳಲ್ಲಿ ಕೇಂದ್ರೀಕರಿಸಿ, ಆ ಅವಯವದ ಮೇಲೆ ಸಂಪೂರ್ಣ ಗಮನ ಸೆಳೆಸುವುದು. ಕಣ್ಣು ಅಥ್ವ ಮೆದುಳು, ಅಥವ ಹೃದಯ, ಲಿವರ್, ಮೂಗು, ಅಥವಾ ಸ್ನಾಯುಗಳು, ಯಾವುದೇ ಭಾಗ ಇರಲಿ, ಅದಿಕ್ಕೆ ಹೆಚ್ಚಾಗಿ ಚಿತ್ತೈಸಿ, ಅವುಗಳನ್ನು ಚೈತನ್ಯ ಗೊಳಿಸುವುದು. ಹಾಗೆ ಮಾಡಿದಾಗ ಆ ಅವಯವಕ್ಕೆ ಗರಿಷ್ಟವಾದ ರಕ್ತ ಸಂಚಲನೆಯಾಗಿ ಅದರಿಂದ ಹೆಚ್ಚು ಪ್ರಮಾಣದಿಂದ ಆಮ್ಲಜನಕ ಮತ್ತು ಪೋಷಕ ಆಹಾರ ಅಂಶಗಳು ಸೇರುತ್ತವೆ. ನರಗಳ ಮೂಲಕ ಹೇಚ್ಚಿನ ಪ್ರಾಮಾಣದ ದೇಹದ ವಿದ್ಯುತ್ ಶಕ್ತಿಯ ಸಂಚಲನವಾಗುತ್ತದೆ. ಹಾಗೆಯೆ ಸ್ನಾಯುಗಳಿಗೆ ಶಕ್ತಿಯು ಸೇರಿ ಕೇಂದ್ರಿತವಾದ ಆಧ್ಯಾತ್ಮಿಕ ಚೈತನ್ಯದಿಂದ ಆಯಾ ಅವಯವಗಳು ಚಟುವಟಿಕೆಗೊಳ್ಳುವಂತಾಗುತ್ತವೆ.

ಈ ಪರಿಯ ವಿಧಾನಗಳನ್ನು ಸರಿಯಾಗಿ ಮತ್ತು ದಿನನಿತ್ಯ ತಪ್ಪದೆ ಮಾಡಿದ ಪಕ್ಷದಲ್ಲಿ ಅದರ ಫಲವು ಉತ್ಕೃಷ್ಟವಾಗಿರುತ್ತದೆ. ಹೀಗಾಗಿ ವಿವೇಕಿಗಳಾದ ನಮ್ಮ ಪ್ರಾಚೀನರು ಸಂಧ್ಯಾವಂದನೆಯನ್ನು ಕೇವಲ ಒಂದು ದೈನಂದಿನ ಯಾಂತ್ರಿಕ ಕ್ರಿಯೆ ಎಂಬುದಾಗಿ ಮಾಡದೆ, ವೈಜ್ಞಾನಿಕ ಹಿನ್ನೆಲೆಯಲ್ಲಿ ಇದನ್ನು ರೂಪಿಸಿ ಅದಕ್ಕೆ ಸಾಂಪ್ರದಾಯಿಕ ಹಾಗು ಆಧ್ಯಾತ್ಮಿಕ ಹೊಳಪನ್ನು ನೀಡಿದರು. ಯಾಕೆಂದರೆ, ಈ ದೆಸೆಯಿಂದಾದರೂ ಅಪ್ರಬುದ್ಧ ಜನಸಾಮಾನ್ಯ ಇದನ್ನು ಅನುಸರಿಸಿ, ಅದರ ಹಿಂದಿನ ವೈಜ್ಞಾನಿಕ ಲಾಭವನ್ನು ಪಡೆಯಬಹುದೆಂದು.

ಸಂಧ್ಯಾವಂದನೆಯನ್ನು ಪೇಟೆಂಟ್ (ವಿಶಿಷ್ಟಾಧಿಕಾರ) ಮಾಡುವುದು:

ನಾವು ಇನ್ನೂ ಸಂಧ್ಯಾವಂದನೆಯ ಹಿನ್ನಲೆಯನ್ನು ಅರ್ಥ ಮಾಡಿಕೊಳ್ಳುವ ತರ್ಕದಲ್ಲಿರುವಾಗಲೇ, ಯಾರೋ ಅಮೆರಿಕೆಯಲ್ಲೋ ಅಥವಾ ಸ್ವಿಟ್ಸರ್ಲೆಂಡಿನಲ್ಲೋ ನಿಜವಾದ ವೈಜ್ಞಾನಿಕ ಸಂಶೋಧನೆ ನಡಿಸಿ, ಅದನ್ನು ಪೇಟೇಂಟ್ ಮಾಡಿಬಿಡಬಹುದು. ಸಂಧ್ಯಾವಂದನೆಗೆ "INTEDGRATED HEALTH SPIRIT- charge the whole world" ಅಂತಲೋ ಅಥವಾ ಇನ್ಯಾವುದು ಇದೇ ತರಹದ ಹೆಸರನ್ನೋ ಇಟ್ಟು ಇಡಿ ವಿಶ್ವವನ್ನೇ ಚೈತನ್ಯಗೊಳಿಸಬಹುದು ಅನ್ನಬಹುದು!. ಹೀಗಾದಾಗ ಸಂಧ್ಯಾವಂದನೆಯು ಮೂಲತಃ ನಮ್ಮ ಆಚರಣೆ ಎನ್ನುವ ಆಕ್ಷೇಪಣೆಯೆತ್ತಲು ನಮಗೆ ಸಾಧ್ಯವಾಗದು. ?