ARADHANA 2007
Sri Raghavendra Swamy Mutt - Mantralaya
ಶ್ರೀ ರಾಘವೇಂದ್ರ ಪ್ರಭುಗಳ ವ್ಯಾಖ್ಯಾನದ ಹಿನ್ನೆಲೆಯಲ್ಲಿ ಹಿರಣ್ಯಗರ್ಭ ಸೂಕ್ತ ಮತ್ತು ಪುರುಷಸೂಕ್ತ.
ವೈದಿಕ ಸಾಹಿತ್ಯದಲ್ಲಿ ಪುರುಷಸೂಕ್ತವು ಅತ್ಯಂತ ಮಹತ್ವದ ಸ್ಥಾನವನ್ನು ಗಳಿಸಿದೆ. ಗಾಯತ್ರೀಮಂತ್ರದ ನಂತರ ಸ್ಥಾನ ಪುರುಷಸೂಕ್ತಕ್ಕಿದೆ. ಅಕಾರ, ಉಕಾರ, ಮಕಾರಗಳಿಂದ ಕೂಡಿದ ಓಂಕಾರದ ವಿಸ್ತಾರವೇ ’ಭೂಃ ಭುವಃ ಸ್ವಃ’ ಎಂಬ ಮೂರು ವ್ಯಾಹೃತಿಗಳು. ಅವುಗಳ ವಿಸ್ತಾರವೇ ತ್ರಿಪಾದಗಳಿಂದ ಕೂಡಿದ ಗಾಯತ್ರೀ. ಗಾಯತ್ರಿಯ ವಿಸ್ತಾರವೇ ಮೂರು ವರ್ಗಗಳುಳ್ಳ ಪುರುಷ ಸೂಕ್ತ. ಪುರುಷಸೂಕ್ತದ ವಿಸ್ತಾರವೇ ಮೂರು ವೇದಗಳು. ಕೃಷ್ಣಾವತಾರಕ್ಕೋಸ್ಕರ ಬ್ರಹ್ಮದೇವರು ಭಗವಂತನನ್ನು ಪ್ರಾರ್ಥಿಸಿದ್ದು ಪುರುಷಸೂಕ್ತದಿಂದಲೇ. ’ಪುರುಷಂ ಪುರುಷಸೂಕ್ತೇನ ಉಪತಸ್ಥೇ ಸಮಾಹಿತಃ | ಆದ್ಯೋವತಾರಃ ಪುರುಷಃ ಪರಸ್ಯ’ ಎಂದು ಭಾಗವತದಲ್ಲಿ ಹೇಳಿದಂತೆ ಭಗವಂತನ ಮೊದಲ ಅವತಾರ ಪುರುಷ. ಭಗವಂತನ ಪುರುಷಾವತಾರಗಳು ಒಟ್ಟು ಮೂರು.
ಪ್ರಥಮಂ ತು ಮಹತ್ಸೃಷ್ಟೃ ದ್ವಿತೀಯಂ ತ್ವಂಡಸಂಸ್ಥಿತಮ್ |
ತೃತೀಯಂ ದೇಹಿನಾ ದೇಹೇ ರೂಪತ್ರಯಮುದಾಹೃತಮ್ ||
ಮಹತ್ತತ್ತ್ವ ಸೃಷ್ಟಿ ಮಾಡಿದ ರೂಪ ಒಂದು. ಬ್ರಹ್ಮಾಂಡದ ಒಳಾಗಿರುವ ರೂಪ ಮತ್ತೊಂದು. ಎಲ್ಲರ ದೇಹದೊಳಗಿರುವ ರೂಪ ಮಹದೊಂದು. ಈ ಮೂರು ರೂಪಗಳನ್ನು ಪ್ರತಿಪಾದಿಸುತ್ತದೆ ಪುರುಷಸೂಕ್ತ.
ಇದು ಋಗ್ವೇದದ ಹತ್ತನೇ ಮಂಡಲದಲ್ಲಿರುವ ತೊಂಭತ್ತನೆಯ ಸೂಕ್ತ. ಇದು ಕೇವಲ ವಿಷ್ಣುವನ್ನೇ ಪ್ರತಿಪಾದಿಸುವ ವಿಶಿಷ್ಟ ಸೂಕ್ತವಾಗಿದೆ. ಇದು ಅಸಾಧಾರಣವಾದ ವಿಷ್ಣುವನ್ನೇ ಪ್ರತಿಪಾದಿಸುವಂತೆ ಯಾವ ವೇದವೇದಾಂಗಗಳೂ ಪ್ರತಿಪಾದಿಸುವುದಿಲ್ಲ. ಆದ್ದರಿಂದ ಇದಕ್ಕೆ ವೇದವೇದಾಂಗಕ್ಕಿಂತ ಹೆಚ್ಚಿನ ಸ್ಥಾನವಿದೆ.
ಯಥಾ ಹಿ ಪೌರುಷಂ ಸೂಕ್ತಂ ವಿಷ್ಣೋರೇವಾಭಿಧಾಯಕಮ್ |
ನ ತಥಾ ಸರ್ವವೇದಾಶ್ಚ ವೇದಾಂಗಾನಿ ಚ ಭಾರತ ||
ಪುರುಷಸೂಕ್ತದ ಮತ್ತೊಂದು ವೈಶಿಷ್ಟ್ಯವೆಂದರೆ, ಇದು ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ ಈ ನಾಲ್ಕೂ ವೇದಗಳಲ್ಲಿ ಪಠಿತವಾಗಿದೆ.
ಇದಂ ಹಿ ಪೌರುಷಂ ಸೂಕ್ತಂ ಸರ್ವ ವೇದೇಷು ಪಠ್ಯತೇ |
ತತಃ ಶ್ರುತಿಭ್ಯಃ ಸರ್ವಾಭ್ಯಃ ಬಲವತ್ ಸಮುದೀರಿತಮ್ ||
ಇದು ವಿಶೇಷವಾಗಿ ಭಗವಂತನ ಷೋಡಷೋಪಚಾರ ಪೂಜೆಗಾಗಿ ಇರುವ ಸೂಕ್ತ. ಪುರುಷಸೂಕ್ತದಿಂದ ಶ್ರೀಹರಿಯ ಪೂಜೆ ಮಾಡುವ ಕ್ರಮ ಇಂತಿದೆ.
"ಆದ್ಯಯಾssವಾಹಯೇದ್ದೇವಂ ಋಚಾ ತು ಪುರುಷೋತ್ತಮಮ್ |
ದ್ವಿತೀಯಯಾssಸನಂ ದದ್ಯಾತ್ ಪಾದ್ಯಂ ಚೈವ ತೃತೀಯಾ||
ಅರ್ಘ್ಯಂ ಚತುರ್ಥಯಾ ದದ್ಯಾತ್ ಪಂಚಮ್ಯಾssಚಮನೀಯಕಮ್ |
ಷಷ್ಠ್ಯಾ ಸ್ನಾನಂ ಪ್ರಕುರ್ವೀತ ಸಪ್ತಮ್ಯಾ ವಸ್ತ್ರಮೇವ ಚ ||
ಯಜ್ಞೋಪವೀತಮಷ್ಟಮ್ಯಾ ನವಮ್ಯಾ ಚಾsನುಲೇಪನಮ್ |
ಪುಷ್ಪಂ ದಶಮ್ಯಾ ದಾತವ್ಯಂ ಏಕಾದಶ್ಯಾ ತು ಧೂಪಕಮ್ |
ದ್ವಾದಶ್ಯಾ ದೀಪಕಂ ದದ್ಯಾತ್ ತ್ರಯೋದಶ್ಯಾ ನಿವೇದನಮ್ |
ಚತುರ್ದಶ್ಯಾ ನಮಸ್ಕಾರಂ ಪಂಚದಶ್ಯಾ ಪ್ರದಕ್ಷಿಣಮ್ ||
ಸ್ನಾನೇ ವಸ್ತ್ರೇ ಚ ನೈವೇದ್ಯೇ ದದ್ಯಾದಾಚಮನೀಯಕಮ್ |
ದಕ್ಷಿಣಾಂ ತು ಯಥಾಶಕ್ತ್ಯಾ ಷೋಡಶ್ಯಾ ತು ಪ್ರದಾಪಯೇತ್ ||
೧) ಸಹಸ್ರಶೀರ್ಷಾ - ಆವಾಹನೆ ೨) ಪುರುಷ ಏವೇದಮ್ - ಆಸನ, ೩) ಏತಾವಾನಸ್ಯ - ಪಾದ್ಯ ೪) ತ್ರಿಪಾದೂರ್ಧ್ವ - ಅರ್ಘ್ಯ, ೫) ತಸ್ಮಾದ್ವಿರಾಟ್ - ಆಚಮನೀಯ, ೬)ಯತ್ಪುರುಷೇಣ - ಸ್ನಾನ, ೭) ತಂ ಯಜ್ಝಂ - ವಸ್ತ್ರ, ೮) ತಸ್ಮಾದ್ಯಜ್ಞಾತ್ ಸರ್ವ ಹುತಃ ಸಂಭೃತಂ - ಯಜ್ಞೋಪವೀತ, ೯) ತಸ್ಮಾದ್ಯಜ್ಞಾನ್ ಸರ್ವ ಹುತಃ ಋಚಃ -ಲೇಪನ, ೧೦) ತಸ್ಮಾದಶ್ವಾ - ಪುಷ್ಪ, ೧೧) ಯತ್ಪುರುಷಂ - ಧೂಪ, ೧೨) ಬ್ರಾಹ್ಮಣೋsಸ್ಯ - ದೀಪ, ೧೩) ಚಂದ್ರಮಾ ಮನಸೋ - ನೈವೇದ್ಯ, ೧೪) ನಾಭ್ಯಾ ಆಸೀತ್ - ನಮಸ್ಕಾರ, ೧೫)ಸಪ್ತಾಸ್ಯಾಸನ್ - ಪ್ರದಕ್ಷಿಣೆ, ೧೬) ಯಜ್ಞೇನ ಯಜ್ಞಮ್ - ದಕ್ಷಿಣೆ.
ಬೇರೆ ಪ್ರಯೋಜನಗಳಿಗಾಗಿಯೂ ಪುರುಷಸೂಕ್ತವನ್ನು ಪಠಿಸುವ ಕ್ರಮವಿದೆ.
ಪ್ರಾಯಶ್ವಿತ್ತೇ ಜಪೇ ಚೈವ ವಿಷೋರಾರಾಧನೇ ತಥಾ |
ಮೋಕ್ಷೇ ವಶ್ಯೇsಗ್ನ್ಯುಪಸ್ಥಾನೇ ಸುಪುತ್ರಪ್ರಾಪಣೇ ತಥಾ ||
ಸರ್ವಕರ್ಮಪಲಪ್ರಾಪ್ತೌ ಆರೋಗ್ಯೇ ಮೃತ್ಯುನಾಶನೇ |
ಏತೇಷ್ವರ್ಥೇಷ್ವಿದಂ ಸೂಕ್ತಂ ಮುನಯೋ ವಿನಿಯುಂಜತೇ ||
೧) ಕರ್ಮಲೋಪ, ವಿಧಿಲೋಪ ಉಂಟಾದಾಗ ಮಾಡಬೇಕಾದ ಪ್ರಾಯಶ್ಚಿತ್ತ, ೨) ಜಪ, ೩) ವಿಷ್ಣುವಿನ ಆರಾಧನೆ, ೪) ಮೋಕ್ಷ, ೫)ಜಗತ್ತನ್ನು ವಶದಲ್ಲಿಟ್ಟುಕೊಳ್ಳುವುದು, ೬) ಅಗ್ನಿಯ ಉಪಸ್ಥಾನ, ೭) ಸುಪುತ್ರಪ್ರಾಪ್ತಿ, ೮) ಸರ್ವಾಭೀಷ್ಟಸಿದ್ಧಿ, ೯)ದೇಹಾರೋಗ್ಯ, ೧೦) ಅಕಾಲಮೃತ್ಯುನಿವಾರಣೆ ಈ ಪ್ರಯೋಜನಗಳಿಗಾಗಿ ಪುರುಷಸೂಕ್ತವನ್ನು ಮುನಿಗಳು ಉಪಯೋಗಿಸುತ್ತಾರೆ.
ಈ ಸೂಕ್ತದಲ್ಲಿ ’ತಸ್ಮಾದ್ವಿರಾಡಾಜಾಯತೆ’ ಇತ್ಯಾದಿ ಮಂತ್ರಗಳಿಂದ ಪರಮಪುರುಷನಿಂದಾದ ಬ್ರಹ್ಮಾಂಡಸೃಷ್ಟಿಯನ್ನು ವರ್ಣಿಸಿದ್ದಾರೆ. ಆ ಪರಮಪುರುಷನು ’ಆಶರೀರಃ ಪ್ರಜ್ಞಾತ್ಮಾ’ ಇತ್ಯಾದಿ ಶ್ರುತಿಗಳಿಂದ ಶರೀರರಹಿತ ಎಂದು ಪ್ರತಿಪಾದಿಸಲ್ಪಟ್ಟಿದ್ದಾನೆ. ಆದ್ದರಿಂದ ಶರೀರವಿಲ್ಲದೇ ಸೃಷ್ಟಿಯನ್ನು ಹೇಗೆ ಮಾಡಿಯಾನು? ಎಂಬ ಸಂಶಯ ಬರುತ್ತದೆ. ಅದರ ಪರಿಹಾರಕ್ಕಾಗಿ ’ಸಹಸ್ರಶೀರ್ಷಾ’ ಇತ್ಯಾದಿಯಾಗಿ ಭಗವಂತನಿಗೆ ಭವ್ಯವಾದ ಶರೀರವಿದೆ ಎಂದು ಹೇಳಲಾಗಿದೆ. ಆದರೆ ಆ ಶರೀರ ಮಾತ್ರ ಪ್ರಾಕೃತವಲ್ಲ. ಏಕೆಂದರೆ ಅವನು ಪ್ರಕೃತಿಯನ್ನು ಮೀರಿದವನು. ’ ಸ ಭೂಮಿಂ ವಿಶ್ವತೋ ವೃತ್ವಾ ಅತ್ಯತಿಷ್ಠದ್ದಾಶಂಗುಲಮ್’ ಎಂಬುದಾಗಿ ಅವನ ಈ ಮಹಿಮೆಯೂ ವರ್ಣಿತವಾಗಿದೆ.
ಅನಂತರದಲ್ಲಿ ಬ್ರಹ್ಮಾಂಡ ಸೃಷ್ಟಿಯಾದ ಬಳಿಕ ಅದರಲ್ಲಿ ಜನಿಸಿದ ದೇವತೆಗಳು ಚತುರ್ಮುಖ ಬ್ರಹ್ಮನನ್ನು ಪಶುವನ್ನಾಗಿ ಸಂಕಲ್ಪಿಸಿ ಮಾನಸಯಜ್ಞದಿಂದ ವಿಷ್ಣುವಿನ ಆರಾಧನೆ ಮಾಡಿದ ಬಗೆಯನ್ನೂ, ಅದರಿಂದ ಪ್ರೀತನಾದ ವಿಷ್ಣುವಿನಿಂದ ಮಾಡಲ್ಪಟ್ಟ ಸಾಧನದ್ರವ್ಯ ಸೃಷ್ಟಿಯನ್ನೂ ವರ್ಣಿಸಿದ್ದಾರೆ.
’ಮುಖಂ ಕಿಮಸ್ಯ’ ಇತ್ಯಾದಿ ಮಂತ್ರಗಳಲ್ಲಿ ಮಾನಸಯಜ್ಞದಲ್ಲಿ ದೇವತೆಗಳು ಭಗವಂತನನ್ನು ಚಿಂತಿಸಿದ ಪ್ರಕಾರವನ್ನೂ ವರ್ಣಿಸಿ, ಕೊನೆಯಲ್ಲಿ ಭಗವದಾರಾಧಕರಾದ ದೇವತೆಗಳಿಗೆ ಮುಕ್ತಿರೂಪಫಲ ದೊರೆತದ್ದನ್ನು ವರ್ಣಿಸಲಾಗಿದೆ.
ಈ ಸೂಕ್ತಕ್ಕೆ ಮಂತ್ರಾಲಯ ಪ್ರಭುಗಳು ವಿಶಿಷ್ಟವಾದ ವ್ಯಾಖ್ಯಾನವನ್ನು ರಚಿಸಿದ್ದಾರೆ. ಅದಕ್ಕೆ ಅನುಗುಣವಾಗಿ ಮೊದಲು ಮಂತ್ರಗಳ ಭಾವಾನುವಾದವನ್ನು ಮಾಡಿ ಬಳಿಕ ವಿಶೇಷ ವಿಚಾರ ಎಂಬ ಶೀರ್ಷಿಕೆಯಲ್ಲಿ ರಾಯರ ವ್ಯಾಖ್ಯಾನದ ಸಾರವನ್ನು ಪ್ರಮೇಯಕ್ಕೆ ಸಂಬಂಧಿಸಿದಂತೆ ಸಂಗ್ರಹಿಸಿಕೊಡಲಾಗಿದೆ.
ಹಿರಣ್ಯಗರ್ಭ ಸೂಕ್ತ
ಹಿರಣ್ಯಗರ್ಭಸೂಕ್ತವು ಭೃಗುಮುನಿಗಳಿಂದ ದೃಷ್ಟವಾದ ಸೂಕ್ತ. ಇದು ಋಗ್ವೇದದ ಹತ್ತನೇ ಮಂಡಲದಲ್ಲಿ ೧೨೧ನೇ ಸೂಕ್ತವಾಗಿದೆ. ಈ ಸೂಕ್ತಕ್ಕೆ ಚತುರ್ಮುಖಬ್ರಹ್ಮ ದೇವರು ದೇವತೆಗಳು. ಅಂದರೆ ಇದರಲ್ಲಿ ಪ್ರತಿಪಾದ್ಯರು. ಈ ಸೂಕ್ತವನ್ನು ಚತುರ್ಮುಖ ಬ್ರಹ್ಮದೇವರ ಮಂತ್ರ ಎಂದು ಶ್ರೀಮದಾಚಾರ್ಯರು ತಂತ್ರಸಾರಸಂಗ್ರಹದಲ್ಲಿ ಉಲ್ಲೇಖಿಸಿದ್ದಾರೆ. "ಬ್ರಹ್ಮಣೇ ಹೃದಯಾಯ ನಮಃ, ಧಾತ್ರೇ ಶಿರಸೇ ಸ್ವಾಹಾ, ವಿರಿಂಚಾಯ ಶಿಖಾಯೈ ವೌಷಟ್, ಅಜಾಯ ಕವಚಾಯ ಹುಂ, ಪಾದ್ಮಾಯ ಅಸ್ತ್ರಾಯ ಫಟ್ ಎಂದು ಅಂಗನ್ಯಾಸದ ಕ್ರಮವನ್ನು ಹೇಳಿದ್ದಾರೆ.
ಹಿರಣ್ಯಗರ್ಭಸೂಕ್ತಂಚ ಭೃಗುದ್ರುಷ್ಟಂ ಪ್ರಕೀರ್ತಿತಮ್ |
ಬ್ರಹ್ಮಧಾತೃ ವಿರಿಂಚಾಚ ಪಾದ್ಮೈರಂಗಮುದಾಹೃತಮ್. ||
ಈ ಸೂಕ್ತವನ್ನು ಜಪಿಸುವಾಗ ಧ್ಯಾನಿಸಲ್ಪಡಬೇಕಾದ ಸ್ವರೂಪವನ್ನೂ ತಿಳಿಸಿದ್ದಾರೆ. - ಭಗವಂತನ ನಾಭಿಕಮಲದಲ್ಲಿ ಕುಳಿತಿರುವ, ಉದಿಸುವ ಸೂರ್ಯಸಮೂಹದಂತೆ ಪ್ರಕಾಶಮಾನವಾದ, ಎರಡು ಕಮಲ, ವರ ಮತ್ತು ಅಭಯಮುದ್ರೆಗಳಿಂದ ಕೂಡಿದ ನಾಲ್ಕು ಕೈಗಳುಳ್ಳ, ಪರವಿದ್ಯೆಯನ್ನು ಬೋಧಿಸುವ ನಾಲ್ಕು ಮುಖವುಳ್ಳ, ’ಅ’ ಶಬ್ದವಾಚ್ಯನಾದ ಶ್ರೀಹರಿಯ ಸುತನಾದ ಬ್ರಹ್ಮನನ್ನು ಧ್ಯಾನಿಸಬೇಕು.
ಧ್ಯಾಯೇನ್ನಿಷಣ್ಣಾಮಜಮಚ್ಯುತನಾಭಿಪದ್ಮೇ | ಪ್ರೋದ್ಯದ್ದಿವಾಕರಸಮೂಹನಿಕಾಶಮಗ್ರ್ಯಮ್ ||
ಮಾತೃಪ್ರಕಾರ ಕರಮುತ್ತಮಕಾಂತಿ ಮದ್ಭಿಃ | ವಕ್ತ್ರೈಃ ಪರಮಾರ್ಥ ವಿದ್ಯಾಮ್ ||
ಈ ಸೂಕ್ತವು ತಂತ್ರಸಾರ ಸಂಗ್ರಹದಲ್ಲಿ ಶ್ರೀಮದಾಚಾರ್ಯರಿಂದ ಉಲ್ಲೇಖಿಸಲ್ಪಟ್ಟಿದ್ದರಿಂದ ಮತ್ತು ಇದರ ಮಂತ್ರಗಳನ್ನು ಆಚಾರ್ಯರು ಅಲ್ಲಲ್ಲಿ ಉದಾಹರಿಸಿದ್ದ್ದರಿಂದ ನಾನು ಇದನ್ನು ವ್ಯಾಖ್ಯಾನ ಮಾಡುತ್ತಿದ್ದೇನೆ" ಎಂದು ಗುರುರಾಜರು ತಮ್ಮ ವ್ಯಾಖ್ಯಾನದಲ್ಲಿ ತಿಳಿಸಿದ್ದಾರೆ.
ಈ ಸೂಕ್ತವು ಚತುರ್ಮುಖಪರವಾದರೂ ಪರಮಮುಖ್ಯವೃತ್ತಿಯಿಂದ ವಿಷ್ಣುಪರವೂ ಆಗಿದೆ. ಆದ್ದರಿಂದ ’ಹಿರಣ್ಯಗರ್ಭನು ಜನಿಸಿದನು’ ಎಂದು ಹೇಳುವ "ಹಿರಣ್ಯಗರ್ಭಃ ಸಮವರ್ತತಾಗ್ರೇ" ಎಂಬ ಮಂತ್ರಕ್ಕೆ ಶ್ರೀಮದ್ರಾಘವೇಂದ್ರತೀರ್ಥರು "ಅಂತರ್ಯಾಮಿ ರೂಪದಿಂದ ವಿಷ್ಣುವು ಪ್ರಾದುರ್ಭವಿಸಿದನು" ಎಂದು ವ್ಯಾಖ್ಯಾನಿಸಿ ಉಭಯಪರತ್ವವನ್ನು ತೋರಿಸಿದ್ದಾರೆ. ಮತ್ತು ಆಯಾ ಮಂತ್ರಗಳಲ್ಲಿ ಹೇಳಲ್ಪಟ್ಟ ಗುಣಗಳು ವಿಷ್ಣುವಿನಲ್ಲಿ ಮುಖ್ಯವೆಂದು ಶ್ರುತಿ ಮತ್ತು ಬ್ರಹ್ಮಸೂತ್ರಗಳನ್ನು ಉದಾಹರಿಸಿ ತೋರಿಸಿದ್ದಾರೆ. ಇದೇ ವ್ಯಾಖ್ಯಾನದ ವೈಶಿಷ್ಟ್ಯ. ತಾವು ಮಾಡಿದ ವ್ಯಾಖ್ಯಾನಕ್ಕೆ ಪೂರ್ವಾಚಾರ್ಯರ ಸಮ್ಮತಿ ಮತ್ತು ವ್ಯಾಕರಣದ ಆಧಾರವನ್ನು ತೋರಿಸಿರುವುದು ಮತ್ತೊಂದು ವೈಶಿಷ್ಟ್ಯ.